ನೇಗಿಲಯೋಗಿ

(ಕರ್ನಾಟಕ ಸರ್ಕಾರ ರೈತಗೀತೆಯೆಂದು ಸ್ವೀಕಾರ ಮಾಡಿರುವ ಕವಿತೆ)


ನೇಗಿಲ ಹಿಡಿದಾ ಹೊಲದೊಳು ಹಾಡುತ

               ಉಳುವಾ ಯೋಗಿಯ ನೋಡಲ್ಲಿ.

ಫಲವನು ಬಯಸದ ಸೇವೆಯೆ ಪೂಜೆಯು

               ಕರ್ಮವೆ ಇಹಪರ ಸಾಧನವು.

ಕಷ್ಟದೊಳನ್ನವ ದುಡಿವನೆ ತ್ಯಾಗಿ

ಸೃಷ್ಟಿನಿಯಮದೊಳಗವನೇ ಭೋಗಿ.

ಲೋಕದೊಳೇನೇ ನಡೆಯುತಲಿರಲಿ

               ತನ್ನೀ ಕಾರ್ಯವ ಬಿಡನೆಂದೂ:

ರಾಜ್ಯಗಳುದಿಸಲಿ ರಾಜ್ಯಗಳಳಿಯಲಿ,

               ಹಾರಲಿ ಗದ್ದುಗೆ ಮಕುಟಗಳು,

ಮುತ್ತಿಗೆ ಹಾಕಲಿ ಸೈನಿಕರೆಲ್ಲ,

ಬಿತ್ತುಳುವುದನವ ಬಿಡುವುದೆ ಇಲ್ಲ.

ಬಾಳಿತು ನಮ್ಮೀ ನಾಗರಿಕತೆ ಸಿರಿ

               ಮಣ್ಣುಣಿ ನೇಗಿಲನಾಶ್ರಯದಿ;

ನೇಗಿಲ ಹಿಡಿದಾ ಕೈಯಾಧಾರದಿ

               ದೊರೆಗಳು ದರ್ಪದೊಳಾಳಿದರು.

ನೇಗಿಲ ಬಲದೊಳು ವೀರರು ಮೆರೆದರು,

ಶಿಲ್ಪಿಗಳೆಸೆದರು, ಕವಿಗಳು ಬರೆದರು.

ಯಾರೂ ಅರಿಯದ ನೇಗಿಲ ಯೋಗಿಯೆ

               ಲೋಕಕೆ ಅನ್ನವನೀಯುವನು.

ಹೆಸರನು ಬಯಸದೆ ಅತಿಸುಖಕೆಳಸದೆ

               ದುಡಿವನು ಗೌರವಕಾಶಿಸದೆ.

ನೇಗಿಲಕುಳದೊಳಗಡಗಿದೆ ಕರ್ಮ;

ನೇಗಿಲ ಮೇಲೆಯೆ ನಿಂತಿದೆ ಧರ್ಮ.