ವಿಶ್ವಮಾನವ ಕುವೆಂಪು

ಋಷಿಪ್ರಜ್ಞೆ – ಕವಿಪ್ರತಿಭೆಗಳ ಅದ್ವೈತ ವ್ಯಕ್ತಿತ್ವದ ಕುವೆಂಪು ಕಾವ್ಯನಾಮ, ಕನ್ನಡಿಗರಿಗೆ ಒಂದು ರೋಮಾಂಚನ. ನಿರಂಕುಶ ನಿಲುವು, ಅನನ್ಯ ಅಂತರ್ಮುಖತೆಗಳಿಂದ ಎರಕಗೊಂಡ ಇವರು ಕನ್ನಡಿಗರ ಮನಸ್ಸನ್ನು ಉದ್ದಕ್ಕೂ ಆಳಿದುದು, ಇಂದು ಇತಿಹಾಸ – ಡಾ. ಎಂ.ಎಂ. ಕಲಬುರ್ಗಿ

ಕರ್ನಾಟಕ – ಕನ್ನಡ – ಕುವೆಂಪು ಈ ಮೂರೂ ಮುಪ್ಪರಿಗೊಂಡು ಇಪ್ಪತ್ತನೆಯ ಶತಮಾನದ ಕನ್ನಡಪ್ರಜ್ಞೆ ರೂಪುಗೊಂಡಿದೆ ಎಂದರೆ ಅತಿಶಯೋಕ್ತಿಯೇನಲ್ಲ. ಹಾಗೆಂದು, ಕುವೆಂಪು ಅವರದು ಭೌಗೋಳಿಕ ಅರ್ಥದ ಕನ್ನಡ ನಾಡಿಗೆ ಮಾತ್ರ ಸೀಮಿತಗೊಂಡ ಆಂಶಿಕ ಪ್ರಜ್ಞೆಯಲ್ಲ; ಕೇವಲ ಭಾರತಕ್ಕೆ ಸೀಮಿತಗೊಂಡ ರಾಷ್ಟ್ರಪ್ರಜ್ಞೆಯೂ ಅಲ್ಲ; ಅವೆಲ್ಲವನ್ನೂ ಒಳಗೊಂಡ ವಿರಾಡ್-ವಿಶ್ವ ಪ್ರಜ್ಞೆ.ಅದುವೆ ಪೂರ್ಣದೃಷ್ಟಿ!

ಬದುಕು-ಬರಹದ ನಡುವಿನ ಗೆರೆಯನ್ನೇ ಅಳಿಸಿದ ಅದ್ವೈತ ಪ್ರಜ್ಞೆಯ -ಕುವೆಂಪು ಕಾವ್ಯನಾಮದ- ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಅವರಂತಹ ಚೇತನ ವಿಶ್ವಸಾಹಿತ್ಯದಲ್ಲಿ ವಿರಳಾತಿ ವಿರಳ. ತಮ್ಮ ಬದುಕು-ಬರಹಗಳ ಮೂಲಕ, ಕನ್ನಡ ವಿವೇಕವನ್ನು ಶ್ರೀಮಂತಗೊಳಿಸುತ್ತಲೇ ವಿಶ್ವಮಾನವರಾಗಿ ವಿರಾಜಮಾನರಾಗಿದ್ದು ಇಂದು ಇತಿಹಾಸ. ಕನ್ನಡದ ನೆಲ ಸೃಷ್ಟಿಸಿದ ಪಂಪ, ಬಸವ ಮೊದಲಾದ ಮಾನವತಾವಾದಿ ಮತ್ತು ಪಂಪ, ಕುಮಾರವ್ಯಾಸಾದಿ ಮಹಾಕವಿ ಪರಂಪರೆಯನ್ನು ಉಜ್ವಲವಾಗಿಸಿದ ಹಾಗೂ ಕಾಲ-ದೇಶಗಳನ್ನು ಮೀರಿ ಮೆರೆದ ಧೀಮಂತ ಚೇತನದ ಸ್ಮರಣೆ ಕನ್ನಡಿಗರ ಪಾಲಿಗೆ ನಿತ್ಯೋತ್ಸವ. ’ಶ್ರೀ’ಯವರ ಹಾರೈಕೆಯಂತೆ ಸುಪಥವಾಗಿ ನಡೆದa
ಕುವೆಂಪು ’ಜೀವನರಥೋತ್ಸವ’ದ ಒಂದು ಮೆಲುಕು ಇಲ್ಲಿದೆ.

ಜನನ

ಬಾಲ್ಯ

ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕು, ಕುಪ್ಪಳಿಯ ಮಂಜಪ್ಪಗೌಡರ ಮಗ ವೆಂಕಟಪ್ಪಗೌಡ ಮತ್ತು ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲ್ಲೂಕಿನ ಅಮ್ಮಡಿ ಮೂಲದ ಹಿರಿಕೊಡಿಗೆಯ ತಿಮ್ಮಯ್ಯನಾಯಕ-ಶೇಷಮ್ಮ ದಂಪತಿಗಳ ಮಗಳು ಸೀತಮ್ಮ ಇವರ ವಿವಾಹ ಮೇ ೩೧, ೧೯೦೧ರಂದು ನೆರವೇರಿತ್ತು. ಈ ದಂಪತಿಗಳ ಚೊಚ್ಚಲ ಕೂಸು ಜನಿಸಿದ್ದು, ಡಿಸೆಂಬರ್ ೨೯, ೧೯೦೪ರಂದು ತಾಯಿಯ ತವರು ಹಿರಿಕೊಡಿಗೆಯಲ್ಲಿ. ಜನ್ಮನಾಮ ಪಟ್ಟಪ್ಪ. ದಾನಮ್ಮ ಮತ್ತು ಪುಟ್ಟಮ್ಮ ಒಡಹುಟ್ಟಿದ ತಂಗಿಯರು.

 

 

ಹಿರಿಕೊಡಿಗೆ ಮತ್ತು ಕುಪ್ಪಳಿಯಲ್ಲಿ ಬಾಲ್ಯ ಕಳೆಯುತ್ತದೆ. ಸಹ್ಯಾದ್ರಿಯ ಅರಣ್ಯದೇವಿ ಬಾಲಕನ ಚೇತನವನ್ನು ಪ್ರವೇಶಿಸಿದ್ದು, ಕವಿಯೇ ಹೇಳಿರುವಂತೆ ಹಿರಿಕೊಡಿಗೆ-ಕುಪ್ಪಳಿ ದಾರಿಯಲ್ಲಿ; ತಾಯಿಯೊಂದಿಗೆ ಹೋಗಿ ಬರುವಾಗ. ’ತೀರ್ಥಹಳ್ಳಿಯ ಕಳೆದು, ತಾಯಿ ತುಂಗೆಯ ದಾಟಿ, ಒಂಬತ್ತು ಮೈಲಿಗಳ ದೂರದಲ್ಲಿದ್ದ’ ಊರು ಕುಪ್ಪಳಿಯ ಕೂಡು ಕುಟುಂಬ ಬಾಲಕ ಪುಟ್ಟಪ್ಪನ ಆಡುಂಬೊಲ. ಮನೆ, ಮುಂದಿನ ತೋಟ, ಮನೆಗೆ ಮುತ್ತಿಡುವಂತಿದ್ದ ಕಾಡು, ಹಿಂದಿನ ಗುಡ್ಡ -ಇಂದಿನ ಕವಿಶೈಲ- ಕವಿಯ ಬಾಲ್ಯಕ್ಕೆ ಇಂದಿಗೂ ಸಾಕ್ಷಿಗಲ್ಲಾಗಿ ನಿಂತಿವೆ. ರಾಮಾಯಣ, ಭಾರತ ಕತೆಗಳು ಬಾಲಕನ ಮನಸ್ಸಗಿಳಿದಿದ್ದು ಕುಪ್ಪಳಿ ಮನೆಯಲ್ಲಿಯೆ.

ವಿದ್ಯಾಭ್ಯಾಸ

ಪುಟ್ಟಪ್ಪನಿಗೆ ಮನೆಯ ಜೊತೆಯಲ್ಲಿ ಪ್ರಕೃತಿಯೂ ಮೊದಲ ಪಾಠಶಾಲೆಯಾಗಿತ್ತು. ಆಗಿನ ಮಲೆನಾಡಿನಲ್ಲಿ ಒಂದೇ ಮನೆಯ ಹಳ್ಳಿಯ ರೈತಕುಟುಂಬದಲ್ಲಿ ಸಹಜವಾಗಿದ್ದ ಕೂಲಿಮಠದಲ್ಲಿ ಅಕ್ಷರಾಬ್ಯಾಸ ಪ್ರಾರಂಭವಾಗುತ್ತದೆ. ಮೋಸಸ್ ಎಂಬ ಗುರುಗಳಿಂದಾಗಿ ಕನ್ನಡ ಕಲಿಕೆಯ ಜೊತೆಯಲ್ಲಿ ಇಂಗ್ಲಿಷ್ ಕೂಡಾ ಕಲಿಯುವ ಅವಕಾಶ ದೊರೆಯುತ್ತದೆ. ಮಕ್ಕಳಿಗೆ ವಿದ್ಯೆ ಕಲಿಸುವುದು ಪ್ರಥಮ ಆದ್ಯತೆಯಾಗಿರದ ಆ ಕಾಲದಲ್ಲಿ, ’ನನ್ನ ಮಗನ್ನ ಚೆನ್ನಾಗಿ ಓದಿಸ್ತಿನಿ’ ಎಂದು ನಿಶ್ಚಯಿಸಿದ ವೆಂಕಟಪ್ಪಗೌಡರು, ತೀರ್ಥಹಳ್ಳಿಯಲ್ಲಿ ಮನೆ ಮಾಡಿ ಮಗನ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡುತ್ತಾರೆ. ಕುಪ್ಪಳಿ ಉಪ್ಪರಿಗೆಯಿಂದ ಪ್ರಾರಂಭವಾದ ಪುಟ್ಟಪ್ಪನ ಅಕ್ಷರಯಾತ್ರೆ ಮೈಸೂರು ವಿಶ್ವವಿದ್ಯಾನಿಲಯದವರೆಗೂ ಸಾಗಿದ ವಿವರಗಳು ಇಂತಿವೆ:

  • ಪ್ರಾಥಮಿಕ ಶಿಕ್ಷಣ – ಪ್ರಾಥಮಿಕ ಶಾಲೆ, ತೀರ್ಥಹಳ್ಳಿ.
  • ಮಾದ್ಯಮಿಕ ಶಿಕ್ಷಣ – ಆಂಗ್ಲೋ ವರ್ನಾಕ್ಯುಲರ್ ಸ್ಕೂಲ್ (ಎ.ವಿ. ಸ್ಕೂಲ್), ತೀರ್ಥಹಳ್ಳಿಯಲ್ಲಿ ನಡೆದು, ೧೯೧೯ರಲ್ಲಿ ಕನ್ನಡ ಲೋಯರ್ ಸೆಕೆಂಡರಿ ಮತ್ತು ೧೯೨೦ರಲ್ಲಿ ಇಂಗ್ಲಿಷ್ ಲೋಯರ್ ಸೆಕೆಂಡರಿ ಪರೀಕ್ಷೆಯಲ್ಲಿ ತೇರ್ಗಡೆ.
  • ಪ್ರೌಢ ಶಾಲಾ ಶಿಕ್ಷಣ – ವೆಸ್ಲಿಯನ್ ಮಿಷನ್ ಸ್ಕೂಲ್, ಮೈಸೂರು. ೧೯೨೦-೧೯೨೪. ಐದನೆಯ ಫಾರಂನಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ಐಚ್ಛಿಕ ವಿಷಯಗಳಾಗಿದ್ದುವು.
  • ಬಿ.ಎ. (ರಾಜಕೀಯ ಶಾಸ್ತ್ರ, ಅರ್ಥಶಾಸ್ತ್ರ, ತತ್ತ್ವಶಾಸ್ತ್ರ) – ಮಹಾರಾಜಾ ಕಾಲೇಜು, ಮೈಸೂರು. ೧೯೨೪-೧೯೨೭
  • ಎಂ.ಎ. (ಕನ್ನಡ) – ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು. ೧೯೨೭-೧೯೨೯. ತತ್ತ್ವಶಾಸ್ತ್ರದಲ್ಲಿ ಎಂ.ಎ. ಮಾಡಬೇಕೆಂಬುದು ಕುವೆಂಪು ಅವರ ಉದ್ದೇಶವಾಗಿತ್ತು ಮತ್ತು ಅದಕ್ಕಾಗಿ ಅರ್ಜಿಯನ್ನೂ ಸಲ್ಲಿಸಿದ್ದರು. ಆದರೆ, ಶ್ರೀ ಎ.ಆರ್. ಕೃಷ್ಣಶಾಸ್ತ್ರಿಗಳ ’ಆ ಅಮೃತ ಕ್ಷಣ’ದ ಕರೆಗೆ ಓಗೊಟ್ಟು ಕನ್ನಡ ಎಂ.ಎ. ಪೂರೈಸಿದರು.

 

ವೃತ್ತಿ

ಮೈಸೂರಿನ ರಾಮಕೃಷ್ಣಾಶ್ರಮದಲ್ಲಿ ಆಶ್ರಯವಿತ್ತು ಸಲುಹಿದ್ದಲ್ಲದೆ, ಕವಿಯ ಶಿಕ್ಷಣ ಮತ್ತು ಸಾಹಿತ್ಯಕ ಬದುಕಿನ ಜೊತೆಯಲ್ಲಿ ವೈಯಕ್ತಿಕ ಬದುಕಿಗೂ ಪ್ರೇರಕರೂ ಮಾರ್ಗದರ್ಶಿಗಳೂ ಆಗಿದ್ದ ಸ್ವಾಮಿ ಸಿದ್ಧೇಶ್ವರಾನಂದ ಸ್ವಾಮೀಜಿಯವರ ಸಲಹೆಯಂತೆ, ಅರ್ಜಿ ಸಲ್ಲಿಸಿದ್ದರಿಂದ ಇಂಟರ್ ಮೀಡಿಯೇಟ್ (ಇಂದಿನ ಯುವರಾಜ) ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿಜೀವನ ಯಾನ ಪ್ರಾರಂಭವಾಗುತ್ತದೆ. ಈ ಯಾನ ಯಶಸ್ವಿಯಾಗಿ ಸಾಗಿ ಮುಕ್ತಾಯಗೊಳ್ಳುವುದು ತಾವು ಓದಿದ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿ ನಿವೃತ್ತರಾದಾಗ! ವೃತ್ತಿಯಾನದ ಕೆಲವು ಮೈಲಿಗಲ್ಲುಗಳು:

  • ೧೯೨೯ರಿಂದ ೧೯೩೯ – ಮೈಸೂರು ವಿಶ್ವವಿದ್ಯಾನಿಲಯದ ಇಂಟರ್ ಮೀಡಿಯೇಟ್ (ಇಂದಿನ ಯುವರಾಜ) ಕಾಲೇಜಿನಲ್ಲಿ ಮೊದಲಿಗೆ, ನಂತರ ಮಹಾರಾಜಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ.
  • ೧೯೩೯ರಿಂದ ಮೈಸೂರು ವಿಶ್ವವಿದ್ಯಾನಿಲಯಕ್ಕೇ ಸೇರಿದ್ದ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ರೀಡರ್ ಹುದ್ದೆ.
  • ೧೯೪೬ರಿಂದ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಕನ್ನಡ ಪ್ರೊಫಸರ್ ಹಾಗೂ ವಿಭಾಗದ ಮುಖ್ಯಸ್ಥರಾಗಿ ಸೇವೆ.
  • ೧೯೫೫ರಿಂದ ಮಹಾರಾಜಾ ಕಾಲೇಜಿನ ಪ್ರಾಂಶುಪಾಲರ ಹುದ್ದೆ.
  • ೧೯೫೬ರಿಂದ ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಯಾಗಿ ಸಾರ್ಥಕ ಸೇವೆ.
  • ೧೯೬೦ರಲ್ಲಿ ನಿವೃತ್ತಿ

ಕುವೆಂಪು ಅವರ ವೃತ್ತಿಬದುಕಿನ ಸಾಧನೆಗಳು ಹತ್ತು ಹಲವಾರು. ಉಪನ್ಯಾಸಕರಾಗಿ ಆ ಹುದ್ದೆಯ ಘನತೆ-ಗೌರವಗಳನ್ನು ಕುವೆಂಪು ಹೆಚ್ಚಿಸಿದ್ದಾರೆ. ಮೈಸೂರು ಸಂಸ್ಥಾನದ ಯುವರಾಜ ಇವರ ವಿದ್ಯಾರ್ಥಿಯಾಗಿದ್ದರು. ಯುವರಾಜನೆಂಬ ಕಾರಣಕ್ಕೆ ಯಾವ ವಿಧದಲ್ಲೂ ರಿಯಾಯಿತಿ ತೋರಿಸುವ ದಾಕ್ಷಿಣ್ಯಕ್ಕೆ ಕುವೆಂಪು ಒಳಗಾಗಲಿಲ್ಲ. ಅರಮನೆಯಿಂದ, ಯುವರಾಜರಿಗೆ ಮನೆಪಾಠ ಮಾಡಲು ಕರೆ ಬಂದಾಗ, ’ಈ ರಾಜಕುಮಾರರುಗಳಿಗೆ ಪಾಠ ಹೇಳುವುದಕ್ಕಿಂತಲೂ ನನಗೆ ಬೇರೆ ಉತ್ತಮತರ ಕೆಲಸವಿದೆ!’ ಎಂದು ನಿರಾಕರಿಸುವ ಧೈರ್ಯವನ್ನು ತೋರಿಸಿದ್ದರು. ’ಕನ್ನಡದ ವಿಷಯದಲ್ಲಿ ನಾನು ಟ್ಯಾಂಕಿನಂತೆ ಮುನ್ನುಗ್ಗುತ್ತೇನೆ; ನೀವು ದಾರಿ ಬಿಟ್ಟುಕೊಟ್ಟಿರೊ ಸರಿ. ಇಲ್ಲವೋ ಅಪ್ಪಚ್ಚಿಯಾಗುತ್ತೀರಿ’ ಎಂದು ಘರ್ಜಿಸಿ, ಉಪಕುಪಲತಿಯಾಗಿ ಅವರು ತೆಗೆದುಕೊಂಡ ಕನ್ನಡಪರ ನಿರ್ಧಾರಗಳಿಂದಾಗಿ, ಪದವಿ ಹಂತದಲ್ಲೂ ಕನ್ನಡ ಮಾಧ್ಯಮ ನೆಲೆ ನಿಲ್ಲುವಂತಾಗಿದ್ದು ಕರ್ನಾಟಕ ಇತಿಹಾಸದಲ್ಲಿ ಅತ್ಯಂತ ಮಹತ್ವದ ಮೈಲಿಗಲ್ಲು. ’ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯಶಿವ!’ ಎಂದು ಹಾಡಿ, ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ತರಗತಿಗಳನ್ನು ಮಹಾರಾಜಾ ಕಾಲೇಜಿನಿಂದ ಬೇರ್ಪಡಿಸಿ ಮಾನಸಗಂಗೋತ್ರಿಯಲ್ಲಿ ನೆಲೆನಿಲ್ಲಿಸಿದ್ದು ಅವರ ಧೀಶಕ್ತಿಗೆ ಮತ್ತೊಂದು ಮಹತ್ಸಾಕ್ಷಿ! ವಿಶ್ವವಿದ್ಯಾನಿಲಯದ ಸಂಶೋಧನಾಂಗ ಮತ್ತು ಬೋಧನಾಂಗಗಳಿಗಿದ್ದ ಕಾರ್ಯಪ್ರಾಮುಖ್ಯತೆಯನ್ನು ಪ್ರಸಾರಾಂಗಕ್ಕೂ ತಂದುಕೊಟ್ಟು ಅದನ್ನೊಂದು ಮಾದರಿ ಸಂಸ್ಥೆಯನ್ನಾಗಿ ರೂಪಿಸಿದ ಕೀರ್ತಿ ಕುವೆಂಪು ಅವರಿಗೆ ಸಲ್ಲುತ್ತದೆ.

ಮಾವ ದೇವಂಗಿಯ ಶ್ರೀ ರಾಮಣ್ಣಗೌಡರ ಕೋರಿಕೆಯಂತೆ, ಅವರ ಮಗಳಿಗೆ ಸ್ವತಃ ಕುವೆಂಪು ಅವರೇ ’ಹೇಮಾವತಿ’ ಎಂದು ಹೆಸರು ಸೂಚಿಸಿ, ಅದರಂತೆ ನಾಮಕರಣವಾಗಿತ್ತು. ಅದೇ ಹೇಮಾವತಿಯವರು ಕುವೆಂಪು ಅವರ ಚೇತನವನ್ನು ಅರ್ಧಾಂಗಿಯಾಗಿ ಅಲ್ಲ, ಪೂರ್ಣಾಂಗಿಯಾಗಿ, ೩೦.೦೪.೧೯೩೭ರಲ್ಲಿ ಪ್ರವೇಶ ಮಾಡುತ್ತಾರೆ. ಶ್ರೀ ರಾಮಕೃಷ್ಣ ಪರಮಹಂಸರ ನೇರ ಶಿಷ್ಯರಲ್ಲೊಬ್ಬರಾದ ಸ್ವಾಮಿ ಶಿವಾನಂದರಿಂದ ದೀಕ್ಷೆ ಕೊಡಿಸಿದ್ದಲ್ಲದೆ, ಕುವೆಂಪು ಅವರ ಶಿಕ್ಷಣ, ವೃತ್ತಿ ಮತ್ತು ಸಾಹಿತ್ಯಕ ಬದುಕಿನಲ್ಲಿ ಪ್ರಮುಖ ಪಾತ್ರವಹಿಸಿದ್ದ, ಅವರ ಗುರು ಸ್ವಾಮಿ ಸಿದ್ಧೇಶ್ವರಾನಂದರು, ಈ ಮದುವೆಗೂ ಕಾರಣರಾಗಿದ್ದರು. ಗುರುಕೃಪೆಯಿಂದ ದಾಂಪತ್ಯ ಸುಪಥಮಯವಾಗಿ ಸಾಗುತ್ತದೆ. ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ, ಇಂದುಕಲಾ ಮತ್ತು ತಾರಿಣಿ ಎಂಬ ನಾಲ್ವರು ಮಕ್ಕಳು. ಬಹುಮುಖ ಪ್ರತಿಭೆಯ ಪೂರ್ಣಚಂದ್ರ ತೇಜಸ್ವಿ ಕನ್ನಡದ ಮಹತ್ವದ ಲೇಖಕರಲ್ಲಿ ಒಬ್ಬರು. ಶ್ರೀಮತಿ ತಾರಿಣಿ ಚಿದಾನಂದ ಅವರೂ ಬರಹಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ.

ಕುಟುಂಬ

ಪುಟ್ಟಪ್ಪ ಕೈಗೂಸಾಗಿದ್ದಾಗಲೇ ಪ್ರಕೃತಿಮಾತೆ ಅರಣ್ಯದೇವಿಯ ರೂಪದಲ್ಲಿ ಪ್ರಸುಪ್ತಸ್ಥಿತಿಯಲ್ಲಿದ್ದ ಸೌಂದರ್ಯಪ್ರಜ್ಞೆಯನ್ನು ಎಚ್ಚರಿಸಿತ್ತೇನೊ! ಬಾಲಕ ಪುಟ್ಟಪ್ಪನಿಗೆ ನಿಸರ್ಗ ಅತ್ಯಂತ ರಮಣೀಯವಾಗಿ, ಕೌತುಕವಾಗಿ ಕಾಣಲಾರಂಬಿಸುತ್ತದೆ. ವಿದ್ಯಾರ್ಥಿಯಾಗಿದ್ದ ಬಾಲಕ ಪುಟ್ಟಪ್ಪನ ಮನಸ್ಸೊಮ್ಮೆ ಭಗವಂತನ ನಿರಂಕುಶೇಚ್ಛೆಯ ಪ್ರಭುತ್ವದ ಮೇಲೆ ದಂಗೆಯೆದ್ದು, ಅದನ್ನು ಮೀರಲು ಯತ್ನಿಸಿತ್ತು. ತೀರ್ಥಹಳ್ಳಿಯಿಂದ ಇಂಗ್ಲಾದಿಗೆ ಹೋಗುವ ಕಾಡುದಾರಿಯಲ್ಲಿ ಹೊಸಮನೆ ಮಂಜಪ್ಪಗೌಡರಿಂದ ’ಲಾಂಗ್ ಫೆಲೊ’ ಕವಿಯ ’ದಿ ಸಾಮ್ ಆಫ್ ಲೈಫ್’ ಪದ್ಯವನ್ನು ಕೇಳಿ ಕವಿಯ ಚೈತನ್ಯ ಎಚ್ಚರಗೊಂಡು ಕಣ್ಣುಬಿಟ್ಟಿತ್ತು. ಮೈಸೂರಿನ ವೆಸ್ಲಿಯನ್ ಮಿಷನ್ ಸ್ಕೂಲ್, ಅಲ್ಲಿನ ಮೇಷ್ಟ್ರುಗಳ ಪಾಠ ಪ್ರವಚನಗಳು ಬಾಲಕನನ್ನು ಇಂಗ್ಲಿಷ್ ಸಾಹಿತ್ಯದೆಡೆಗೆ ತಂದು ನಿಲ್ಲಿಸಿದ್ದವು. ’ಡ್ಯಾನಿಯಲ್ ಡೀಫೊ’ ಕವಿಯ ’ರಾಬಿನ್ ಸನ್ ಕ್ರೂಸೊ’ ಕೃತಿ ಮತ್ತು ಶ್ರೀರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದರ ಕೃತಿಗಳು ಅವರಿಗೆ ಸಾಹಿತ್ಯದ ಅನಂತತೆಯ ದರ್ಶನ ಮಾಡಿಸಿದ್ದುವು. ಹೀಗೆ ಸಿದ್ಧವಾಗುತ್ತಿದ್ದ ಮನೋಭೂಮಿಕೆಗೆ, ರಜಾದಿನಗಳಲ್ಲಿ ಮತ್ತೆ ಮತ್ತೆ ಮಲೆನಾಡಿನ ದರ್ಶನ, ಅದರ ಅನುಭವಗಳು ಪುಟ್ಟಪ್ಪನಿಂದ ಅಭಿವ್ಯಕ್ತಿಗೆ ಕಾಯುತ್ತಿದ್ದುವು ಎನ್ನಿಸುತ್ತದೆ. ಮಿಷನ್ ಸ್ಕೂಲಿನ ಪರೀಕ್ಷೆಯಲ್ಲಿ ಬೈಬಲ್ ಪತ್ರಿಕೆಗೆ ಬರೆದ ಉತ್ತರದಲ್ಲಿ ಹಾಗೂ ಪ್ರಿನ್ಸಿಪಾಲರ ಬೀಳ್ಕೊಡಿಗೆಗೆ ಬರೆದ ಪದ್ಯ ’ಅಡ್ಯೂ’ ಮುಖಾಂತರ ಅಭಿವ್ಯಕ್ತಿಗೆ ಬಾಗಿಲು ತೆರೆದಿತ್ತು. ಇನ್ನೂ ವಿದ್ಯಾರ್ಥಿ ದಿಸೆಯಲ್ಲಿದ್ದಾಗಲೇ ಏಳು ಕವನಗಳ ’ಬಿಗಿನರ್‍ಸ್ ಮ್ಯೂಸ್’ ಎಂಬ ಇಂಗ್ಲಿಷ್ ಕವನಸಂಕಲನವನ್ನು, ತನ್ನ ಹದಿನೆಂಟನೆಯ ವಯಸ್ಸಿನಲ್ಲಿಯೇ ಪ್ರಕಟಿಸುವ ಮೂಲಕ ಮೈಸೂರು ಸಾಹಿತ್ಯಕ ವಲಯವನ್ನು ಪ್ರವೇಶಿಸಿಬಿಟ್ಟಿದ್ದರು!

 

ಕವಿಚೇತನ ಕುವೆಂಪು

ಬಿಗಿನರ್‍ಸ್ ಮ್ಯೂಸ್ ಸಂಕಲನ ಪ್ರಕಟಣೆ, ಪ್ರಕಟಣೋತ್ತರ ಪ್ರಶಂಸೆ ಇವುಗಳ ನಡುವೆಯೂ ಇಂಗ್ಲಿಷ್ ಪದ್ಯಗಳ ರಚನೆ ಅವಿಚ್ಛನ್ನವಾಗಿ ಸಾಗುತ್ತಿತ್ತು. ಜೊತೆಗೆ ಅಮಲನ ಕಥೆಯ ಮೂಲಕ ಕನ್ನಡದಲ್ಲೂ ಬರೆಯುವ ಪ್ರಯತ್ನವೂ ಸಾಗಿತ್ತು. ಆದರೆ, ಇಂಗ್ಲಿಷ್ ಬರವಣಿಗೆಗೆ ಮನಸ್ಸು ಕೈಗಳೆರಡೂ ತಹತಹಿಸುತ್ತಾ ಪದ್ಯರಚನೆ ಹುಲುಸಾಗಿ ನಡೆಯುತ್ತಿತ್ತು. ಈ ನಡುವೆ ಮಹಾರಾಜಾ ಹೈಸ್ಕೂಲಿನ ಇತಿಹಾಸ ಅಧ್ಯಾಪಕರೂ ಕುವೆಂಪು ಅವರ ಕವಿತಾ ಶಕ್ತಿಗೆ ಪ್ರೋತ್ಸಾಹಕರೂ ಆಗಿದ್ದ ಶ್ರೀ ಎಂ.ಹೆಚ್. ಕೃಷ್ಣ ಐಯಂಗಾರ್ ಅವರಿಂದ ನಿರ್ದೇಶಿತರಾಗಿ, ಐರಿಷ್ ಕವಿ ಜೇಮ್ಸ್ ಹೆಚ್. ಕಸಿನ್ಸ್ ಅವರನ್ನು ಭೇಟಿ ಮಾಡುವ ಸಂದರ್ಭ ಸೃಷ್ಟಿಯಾಗುತ್ತದೆ. ೧೯೨೪ ಜುಲೈ ೨ನೆಯ ತಾರೀಖು ಇಂಗ್ಲಿಷ್ ಕವಿಯೆಂಬ ಹಮ್ಮಿನಿಂದಲೇ ಕಸಿನ್ಸ್ ಅವರನ್ನು ಪುಟ್ಟಪ್ಪನವರು ಭೇಟಿಯಾಗುತ್ತಾರೆ. ಪುಟ್ಟಪ್ಪನವರ ಇಂಗ್ಲಿಷ್ ಪದ್ಯಗಳನ್ನೆಲ್ಲಾ ತಿರಿವಿ ಹಾಕಿ, ಸ್ವಲ್ಪ ಅಸಮಧಾನದ ದನಿಯಲ್ಲೇ ಕಸಿನ್ಸ್ ಅವರು ’ಏನಿದೆಲ್ಲ ಕಗ್ಗ? ನಿಮ್ಮ ಮೈಮೇಲೆ ನೋಡಿದರೆ ತಲೆಯಿಂದ ಕಾಲಿನವರೆಗೂ ಸ್ವದೇಶಿ ವಸ್ತ್ರಗಳೇ ಕಾಣುತ್ತವೆ. ಇದು ಮಾತ್ರ ಸ್ವದೇಶಿಯಲ್ಲ! ನಿಮ್ಮ ಭಾಷೆಯಲ್ಲಿ ಏನಾದರೂ ಬರೆದಿದ್ದೀರಾ?’ ಎಂದು ಕೇಳುತ್ತಾರೆ. ಮಾತುಕತೆಯ ಮುಕ್ತಾಯದಲ್ಲಿ, ಸ್ವಂತ ಭಾಷೆಯಲ್ಲಿಯೇ ಬರೆಯುವಂತೆ ಹೇಳಿ ಬೀಳ್ಕೊಡುತ್ತಾರೆ. ತಕ್ಷಣಕ್ಕೆ ಕಸಿನ್ಸ್ ಅವರ ಬುದ್ಧಿವಾದ ವಿಪರೀತವಾಗಿ ಕಂಡರೂ, ಕವಿ ಕನ್ನಡದಲ್ಲಿ ಪದ್ಯರಚನೆಗೆ ಮನಸ್ಸು ಮಾಡುತ್ತಾರೆ. ಕವಿಯೇ ಹೇಳುವಂತೆ ’ಕಸಿನ್ಸ್ ಅವರ ಹಿತವಚನ ಮೇಲೆಮೇಲಕ್ಕೆ ತಿರಸ್ಕೃತವಾಗಿದ್ದರೂ ಸುದೈವದಿಂದ ನನ್ನ ಅಂತಃಪ್ರಜ್ಞೆ ಅದನ್ನು ಒಪ್ಪಿಕೊಂಡಿತ್ತೆಂದು ತೋರುತ್ತದೆ. ಕನ್ನಡ ವಾಗ್ದೇವಿಯ ಕೃಪೆಯೂ ಆ ಸುಸಂಧಿಯನ್ನು ಉಪಯೋಗಿಸಿಕೊಂಡು ತನ್ನ ಕಂದನನ್ನು ತನ್ನ ಹಾಲೆದೆಗೆ ಎಳೆದುಕೊಂಡಳು’.

ಜೇಮ್ಸ್ ಹೆಚ್. ಕಸಿನ್ಸ್ ಭೇಟಿ

Cousins

ಕನ್ನಡ ಬನದ ಹೊಸಕೋಗಿಲೆ

ನಂತರ ’ಪೂವು’ ಎಂಬ ಕವನದಿಂದ ಪ್ರಾರಂಭವಾಗುವ ಕನ್ನಡ ಸಾಹಿತ್ಯ ಯಾತ್ರೆ ಪ್ರಾರಂಭದಲ್ಲಿ ಇಂಗ್ಲಿಷ್ ಜೊತೆಜೊತೆಯಾಗಿಯೇ ಸಾಗಿ, ಬಿ.ಎ. ಮುಗಿಯುವಷ್ಟರಲ್ಲಿ ಪೂರ್ಣ ಕನ್ನಡದ ದಾರಿಗೆ ಬಂದು ನಿಂತುಬಿಡುತ್ತದೆ. ಮೊದಮೊದಲು ’ಕಿಶೋರಚಂದ್ರವಾಣಿ’ ಎಂಬ ಕಾವ್ಯನಾಮದಿಂದ ಬರೆಯಲಾರಂಭಿಸಿದ್ದರೂ ನಂತರ ’ಕುವೆಂಪು’ ಎಂಬ ಕಾವ್ಯನಾಮ ಸ್ಥಿರವಾಗಿ ನಿಲ್ಲುತ್ತದೆ. ’ಅಮಲನ ಕಥೆ’ ಪೂರ್ಣವಾಗುತ್ತದೆ. ಹಲವಾರು ಕವಿತೆಗಳು, ನೀಳ್ಗವಿತೆಗಳು, ಸಾನೆಟ್ಟುಗಳು, ನಾಟಕಗಳು ರಚನೆಯಾಗುತ್ತವೆ. ೧೯೨೬ರಲ್ಲಿ ’ಹಾಳೂರು’ ಎಂಬ ದೀರ್ಘ ಕಥನಕವನವೂ ರಚನೆಯಾಗುತ್ತದೆ. ೧೯೨೮ರಲ್ಲಿ ’ಜಲಗಾರ’, ’ಯಮನ ಸೋಲು’ ನಾಟಕಗಳು ಸರಳರಗಳೆಯಲ್ಲಿ ರಚಿತವಾಗಿ ಗಮನಸೆಳೆಯುತ್ತವೆ. ’ಬ್ರೌನಿಂಗ್’ ಕವಿಯ ’ದಿ ಪ್ರೈಡ್ ಪೈಪರ್ ಆಫ್ ಹ್ಯಾಮಿಲ್ಟನ್’ ಕವಿತೆಯ ಪ್ರಭಾವದಿಂದ ’ಬೊಮ್ಮನಹಳ್ಳಿ ಕಿಂದರಿಜೋಗಿ’ ರಚನೆಯಾಗಿ ’ಕಿರಿಯರ ಕಾಣಿಕೆ’ಯಲ್ಲಿ ಪ್ರಕಟವಾಗುತ್ತದೆ. ಮುಂದೆ ಕನ್ನಡ ನಾಡಿನ ’ನಾಡಗೀತೆ’ಯಾದ ’ಜಯ್ ಭಾರತ ಜನನಿಯ ತನುಜಾತೆ’ ಮತ್ತು ’ರೈತಗೀತೆ’ಯಾದ ’ನೇಗಿಲಯೋಗಿ’ ಕವನಗಳೂ ಈ ಹಂತದಲ್ಲಿಯೇ ರಚನೆಯಾಗುತ್ತವೆ. ಈ ಎಲ್ಲಾ ಸಾಧನೆಗಳು, ೧೯೨೮ರಲ್ಲಿ ಬೆಂಗಳೂರಿನಲ್ಲಿ ನಡೆದ ವಿದ್ಯಾರ್ಥಿ ಕವಿಸಮ್ಮೇಳನದ ಅಧ್ಯಕ್ಷತೆಯ ಗೌರವವನ್ನೂ ಕವಿಗೆ ದಯಪಾಲಿಸುತ್ತವೆ. ೧೯೩೦ರಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಪ್ರೋತ್ಸಾಹದಿಂದ, ಬಿ.ಎಂ.ಶ್ರೀ.ಯವರ ಮುನ್ನುಡಿಯೊಂದಿಗೆ ’ಕೊಳಲು’ ಪ್ರಥಮ ಕವನಸಂಕಲನ ಪ್ರಕಟವಾಗುತ್ತದೆ. ’ಕೊಳಲು’ ಸಂಕಲನದ ಮೊದಲ ಕವಿತೆ ’ಗೊಲ್ಲನ ಬಿನ್ನಹ’ದ ಮೊದಲ ಎರಡು ಸಾಲುಗಳು ಇವು:

ಕಾಡಿನ ಕೊಳಲಿದು, ಕಾಡ ಕವಿಯು ನಾ,

ನಾಡಿನ ಜನರೊಲಿದಾಲಿಪುದು.

823

ಕವಿಯ ಕೋರಿಕೆಯನ್ನು ಕನ್ನಡ ನಾಡು ಮನಸಾ ಸ್ವೀಕರಿಸಿತು. ಕೊಳಲಿನಿಂದ ಪ್ರಾರಂಭಿಸಿ, ಸುಮಾರು ಅರ್ಧ ಶತಮಾನ ಕಾಲ, ಕಾವ್ಯ, ನಾಟಕ, ಕಥೆ, ಕಾದಂಬರಿ, ವಿಮರ್ಶೆ, ಮೀಮಾಂಸೆ, ವೈಚಾರಿಕ ಸಾಹಿತ್ಯ, ಶಿಶುಸಾಹಿತ್ಯ, ಜೀವನಚರಿತ್ರೆ, ಆತ್ಮಚರಿತ್ರೆ, ಅನುವಾದ… ಹೀಗೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕುವೆಂಪು ಸಾಹಿತ್ಯ ಬೆಳಕು ಕಂಡಿದೆ. ’ಕಾನೂರು ಹೆಗ್ಗಡಿತಿ’ ಮತ್ತು ’ಮಲೆಗಳಲ್ಲಿ ಮದುಮಗಳು’ ಅವರ ಮಹಾಕಾದಂಬರಿಗಳು. ’ಚಿತ್ರಾಂಗದ’ ಎಂಬ ಖಂಡಕಾವ್ಯದ ನಂತರ ಸುಮಾರು ಒಂಬತ್ತು ವರ್ಷಗಳ ಕಾಲ ’ಕುವೆಂಪುವ ಸೃಜಿಸಿದ’ ’ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯ ಭಾರತೀಯ ಸಾಹಿತ್ಯ ಲೋಕದ ಪರಮಸಿದ್ಧಿಗಳಲ್ಲಿ ಒಂದು! ವೈಚಾರಿಕ ಜಾಗೃತಿ ಮತ್ತು ಸಂಘರ್ಷಗಳನ್ನು ಹುಟ್ಟುಹಾಕಿದ ’ಜಲಗಾರ’, ’ಶೂದ್ರತಪಸ್ವಿ’, ’ಬೆರಳ್ ಗೆ ಕೊರಳ್’ ಹಾಗೂ ಯುದ್ಧದ ನಿರರರ್ಥಕತೆಯನ್ನು ಸಾರಿದ ’ಶ್ಮಶಾನ ಕುರುಕ್ಷೇತ್ರಂ’ ಮೊದಲಾದ ನಾಟಕಗಳು ಭಾರತೀಯ ನಾಟಕ ಪರಂಪರೆಯಲ್ಲಿ ಕುವೆಂಪು ಅವರನ್ನು ಶಾಶತವಾಗಿ ಸಂಸ್ಥಾಪಿಸಿಬಿಟ್ಟಿವೆ.

೧೯೫೦ರಲ್ಲಿ ’ಉದಯರವಿ’ ಪ್ರಕಾಶನ ಸಂಸ್ಥೆಯನ್ನು ಹುಟ್ಟು ಹಾಕಿ, ಅದರ ಮೂಲಕವೇ ತಮ್ಮ ಕೃತಿಗಳನ್ನು ಪ್ರಕಟಿಸಿದ ಕೀರ್ತಿ ಇವರದು. ಉದಯರವಿ ಪ್ರಕಾಶನ ಸಂಸ್ಥೆ ಇಂದಿಗೂ ಕ್ರಿಯಾಶೀಲವಾಗಿದ್ದು ಕುವೆಂಪು ಕೃತಿಗಳ ಪ್ರಕಟಣೆ ಅವಿಚ್ಛನ್ನವಾಗಿ ನಡೆದಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯ ಕುವೆಂಪು ಸಮಗ್ರ ಕಾವ್ಯ, ನಾಟಕ ಮತ್ತು ಗದ್ಯ ಸಂಪುಟಗಳನ್ನು ಪ್ರಕಟಿಸಿತ್ತು. ನಂತರ ಕುಪ್ಪಳಿಯ ರಾಷ್ಟ್ರಕವಿ ಪ್ರತಿಷ್ಠಾನವು ಕುವೆಂಪು ಅವರ ಸಮಗ್ರ ಸಾಹಿತ್ಯವನ್ನು ಹನ್ನೊಂದು ಸಂಪುಟಗಳಲ್ಲಿ ಪ್ರಕಟಿಸಿದ್ದು, ಅದರ ದ್ವಿತೀಯ ಆವೃತ್ತಿ ೨೦೧೭ರಲ್ಲಿ ಹೊರಬಂದಿದೆ.